ಕುಂದಾಪುರ: ಕೋಟ ಸಮೀಪದ ಮಣೂರು ಗ್ರಾಮದಲ್ಲಿ ಒಂಟಿ ವೃದ್ಧೆ ಯೋರ್ವರನ್ನು ಚಿನ್ನಾಭರಣದ ಸಲುವಾಗಿ ಹತ್ಯೆ ನಡೆಸಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ನೂತನ ಎಸ್ಪಿ ಅವರಿಗೆ ಇದು ದೊಡ್ಡ ಸವಾಲಾಗಿದೆ.
ಮಣೂರು ಬಾಳೆಬೆಟ್ಟು ನಿವಾಸಿ ಗಿರಿಜಾ ಯಾನೆ ಗಿರಿಜಮ್ಮ ಉರಾಳ (84) ಹತ್ಯೆಗೊಳಗಾದವರು. ಮಕ್ಕಳಿ ಲ್ಲದ ಗಿರಿಜಮ್ಮ ಅವರು ತಮ್ಮ ಪತಿಯ ನಿಧನದÀ ಬಳಿಕ 25 ವರ್ಷಗಳಿಂದಲೂ ಮಣೂರಿನ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇರುವ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಬುಧವಾರ ರಾತ್ರಿ ಸಮೀಪದ ಮನೆಯ ಮಹಿಳೆಯೊಂದಿಗೆ ಮಾತನಾಡಿ ಟಿ.ವಿ. ನೋಡಿ ಪುನಃ ಮರಳಿದ್ದ ಅವರು ಉಬ್ಬಸದಿಂದ ಬಳಲುತ್ತಿದ್ದೇನೆ, ವಿಶ್ರಾಂತಿ ಬೇಕು ಎಂಬುದಾಗಿ ಸ್ಥಳೀಯ ನಿವಾಸಿ ಮಹಿಳೆಯೋರ್ವರಲ್ಲಿ ಹೇಳಿಕೊಂಡಿದ್ದರು. ಅಲ್ಲದೇ ಮುಖಕ್ಕೆ ತಲೆಗೆ ಬಟ್ಟೆಯಿಂದ ಸುತ್ತಿಕೊಂಡಿದ್ದರು ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ಹಾಸನದ ಬೇಲೂರಿನಲ್ಲಿ ಕುಟುಂಬಿಕರ ಮನೆಯ ಮದುವೆಗೆ ಬರುವುದಿಲ್ಲವೆಂದೂ ದೂರವಾಣಿಯಲ್ಲಿ ಸಹೋದರನಿಗೆ ತಿಳಿಸಿದ್ದರು.
ಗುರುವಾರ ಬೆಳಿಗ್ಗೆ ಮನೆ ಸಮೀಪದ ಮಹಿಳೆಯೋರ್ವರು ಗಿರಿಜಮ್ಮ ಅವರ ಮನೆಗೆ ಹಾಲು ನೀಡಲು ಬಂದಾಗ ಬಾಗಿಲು ಮುಚ್ಚಿದ್ದು ಕೂಗಿದರೂ ತೆರೆಯಲಿಲ್ಲ, ಬಲವಾಗಿ ಬಾಗಿಲು ತಳ್ಳಿದಾಗ ಚಿಲಕ ತೆರೆದುಕೊಂಡಿದ್ದು ಒಳಹೊಕ್ಕು ನೋಡಿದ ಮಹಿಳೆಗೆ ಗಿರಿಜಮ್ಮರ ಶವ ಕಂಡುಬಂದಿದ್ದು, ಬಳಿಕ ವೃದ್ಧೆಯ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಹಾಸಿಗೆಯ ಮೇಲೆ ಮಲಗುವ ಗಿರಿಜಮ್ಮ ನೆಲದ ಮೇಲಿದ್ದರು. ಅಲ್ಲದೇ ಬಾಯಿ ಹಾಗೂ ಎಡಕಿವಿಗೆ ಬೆಂಡೋಲೆ ಹಾಕುವ ಜಾಗದಲ್ಲಿ ರಕ್ತಗಾಯವಾಗಿದ್ದನ್ನು ಗಮನಿಸಿ ಸಂಬಂಧಿಕರು ಕೋಟ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಮನೆಯ ಮೇಲ್ಮಾಡಿನ 3 ಹೆಂಚು ಕಿತ್ತಿದ್ದು ಇದು ಕಳ್ಳರ ಕೃತ್ಯ ಎಂದು ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದಾರೆ. ಮೂಲವೊಂದರ ಪ್ರಕಾರ ಇಷ್ಟು ದಿನಗಳವರೆಗೂ ಮನೆಯ ಯಾವುದೇ ಹೆಂಚುಗಳನ್ನು ತೆಗೆದಿರಲಿಲ್ಲ. ಸಾಮಾನ್ಯವಾಗಿ ಬೆಳಕಿನ ವ್ಯವಸ್ಥೆಗೆ ಹಜಾರದ ಒಂದು ಹೆಂಚು ಕೀಳುವುದು ರೂಢಿ ಆದರೇ ಪ್ರಸ್ತುತ ಸ್ಥಳದಲ್ಲಿ ಮನೆಗೆ ಹೊಂದಿಕೊಂಡಿದ್ದ ಶೌಚಾಲಯದ 3 ಹೆಂಚುಗಳನ್ನು ಕಿತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದಲ್ಲದೇ ಇದು ಚಿನ್ನಾಭರಣಕ್ಕಾಗಿ ದುಷ್ಕರ್ಮಿಗಳು ಹೆಂಚು ಕಿತ್ತು ಒಳಗೆ ಪ್ರವೇಶಿಸರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಪೊಲೀಸರು ಇದೊಂದು ವ್ಯವಸ್ಥಿತ ಕೊಲೆ ಪ್ರಕರಣ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.
ವೃದ್ಧೆಯ ಕಿವಿ, ಮೂಗು ಹಾಗೂ ಕುತ್ತಿಗೆಯ ಆಭರಣಗಳು ನಾಪತ್ತೆಯಾಗಿದ್ದು, ಇದೊಂದು ಚಿನ್ನಾಭರಣ ಮತ್ತು ಹಣದ ಆಸೆಗಾಗಿಯೇ ಮಾಡಿದ ಕೊಲೆಯೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ರಾ. ಹೆ. ಆಸುಪಾಸಿನಲ್ಲಿಯೇ ನಡೆದ ಈ ಪ್ರಕರಣ ಸ್ಥಳೀಯರನ್ನೂ ಸೇರಿದಂತೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ. ಘಟನಾ ಸ್ಥಳಕ್ಕೆ ಬಂದ ಶ್ವಾನ ದಳ ಸ್ವಲ್ಪ ದೂರ ಹೋಗಿ ಹಿಂತಿರುಗಿದೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 comments:
Speak up your mind
Tell us what you're thinking... !