ಪಾದೂರು ಕ್ರಷರ್: ಸರ್ವೆ ಅಧಿಕಾರಿಗಳಿಗೆ ಘೇರಾವ್ - Jayakirana Morning News
Headlines News :
Home » , , » ಪಾದೂರು ಕ್ರಷರ್: ಸರ್ವೆ ಅಧಿಕಾರಿಗಳಿಗೆ ಘೇರಾವ್

ಪಾದೂರು ಕ್ರಷರ್: ಸರ್ವೆ ಅಧಿಕಾರಿಗಳಿಗೆ ಘೇರಾವ್

Written By Umanatha Shetty on Thursday, 21 August 2014 | 22:19

ಜಯಕರ್ನಾಟಕ ಅಧ್ಯಕ್ಷನಿಗೆ ಗ್ರಾಮಸ್ಥರಿಂದ ಧಿಕ್ಕಾರ
ಪಡುಬಿದ್ರಿ: ಮಜೂರು ಗ್ರಾ.ಪಂ. ವ್ಯಾಪ್ತಿಯ ಪಾದೂರಿನಲ್ಲಿ ಕ್ರಷರ್ ಘಟಕ ಸ್ಥಾಪನೆಯ ಬಗ್ಗೆ ಸರ್ವೆಗಾಗಿ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳನ್ನು ಸ್ಥಳೀ ಯರು ಘೇರಾವ್ ಹಾಕಿ ಸ್ಥಳದಿಂದ ಓಡಿಸಿ, ಜೊತೆಗೆ ಬಂದಿದ್ದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿಗೆ ಧಿಕ್ಕಾರ ಕೂಗಿ ಅನಿರೀಕ್ಷಿತ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಪಾದೂರು ಕ್ರೂಡ್ ಆಯಿಲ್ ಘಟಕದ ಸ್ಥಾಪನೆಯ ವೇಳೆ ಒಡೆಯ ಲಾಗಿದ್ದ ಬಂಡೆ ಕಲ್ಲುಗಳನ್ನು ಕ್ರಷರ್ ಮಾಡುವ ಸಲುವಾಗಿ ಕ್ರಷರ್ ಘಟಕ ವೊಂದರ ಅರ್ಜಿಗೆ ಜಿಲ್ಲಾಡಳಿತ ಸ್ಥಳ ವನ್ನು ಸುರಕ್ಷಿತವಲಯ ಎಂದು ಘೋಷಿಸಿತ್ತು. ಈ ನೋಟಿಫಿಕೇ ಶನ್‍ನ ಆಧಾರದಲ್ಲಿ ಉಡುಪಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ನಿರಂಜನ್ ಅವರು ಸಿಬ್ಬಂದಿ ಜತೆ ಜಾಗದ ಸರ್ವೇಗಾಗಿ ಗುರುವಾರ ಆಗಮಿಸಿದ ವೇಳೆ ಗ್ರಾಮಸ್ಥರು ಅವರ ವಾಹನಕ್ಕೆ ತಡೆಯೊಡ್ಡಿ ಮಾತಿನ ಚಕಮಕಿಗೈದು ಪ್ರತಿಭಟನೆ ನಡೆಸಿದರು.
ಜನರ ಆಕ್ರೋಶ ಮನಗಂಡ ಅಧಿಕಾರಿಗಳು ಶಿರ್ವ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಾಪು ಸಿ.ಐ ಸುನಿಲ್ ನಾಯ್ಕ್ ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಗ್ರಾಮಸಭೆಗೆ ಬಂದು ಯೋಜನೆಯ ಬಗ್ಗೆ ವಿವರಣೆ ಕೊಟ್ಟ ಬಳಿಕವಷ್ಟೇ ಪ್ರಕ್ರಿಯೆ ಮುಂದುವರಿಸಬೇಕೆಂದು ಭರವಸೆ ಗಿಟ್ಟಿಸಿಕೊಂಡ ಬಳಿಕ ಅಧಿಕಾರಿಗಳನ್ನು ಸ್ಥಳದಿಂದ ತೆರಳಲು ಅನುವು ಮಾಡಿಕೊಟ್ಟರು.
ಗ್ರಾಮ ಸಭೆ ರದ್ದಾಗಿತ್ತು: ಈ ಮುನ್ನ ಮಜೂರು ಗ್ರಾ.ಪಂ.ನ ವಾರ್ಡ್ ಸಭೆಯಲ್ಲಿ ಕ್ರಷರ್ ಸಂಬಂಧಿತ ವಿಷಯ ಪ್ರಸ್ತಾಪನೆ ಮತ್ತು ತಿಳುವಳಿಕಾ ಹೇಳಿಕೆಗಾಗಿ ಗ್ರಾಮಸಭೆಯಂದು ಪರಿಸರ ಮತ್ತು ಗಣಿ ಇಲಾಖೆಯ ಪ್ರತಿನಿಧಿ ಹಾಜರಿರಬೇಕೆಂದು ಲಿಖಿತ ಮನವಿ ಮಾಡಿದ್ದರು. ಆದರೆ ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಹಾಜರಿರದ ಕಾರಣ ಸಾರ್ವಜನಿಕರೇ ಗ್ರಾಮಸಭೆಯನ್ನು ರದ್ದುಗೊಳಿಸಿದ್ದರು. ಜಲ್ಲಿ ಕ್ರಷರ್‍ಗಾಗಿ ಪ್ರಸ್ತುತ ವಿವಾದಿತ ಜಾಗ ಸುರಕ್ಷಿತ ವಲಯ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದ್ದ ಬೆನ್ನಲ್ಲೇ ಜಿ.ಪಂ.ನ ಸಭೆಯಲ್ಲೂ ಜಿ.ಪಂ. ಸದಸ್ಯರುಗಳು ಆಕ್ಷೇಪವೆತ್ತಿದ್ದು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರೂ ಲೆಕ್ಕಿಸದೆ ಜಿಲ್ಲಾಡಳಿತ ಏಕಾಏಕಿ ಸರ್ವೇಗೆ ಮುಂದಾಗಿದೆ.
ಜಯಕರ್ನಾಟಕ ಅಧ್ಯಕ್ಷಗೆ ಧಿಕ್ಕಾರ: ಸರ್ವೇಯ ಸಲುವಾಗಿ ಅಧಿಕಾರಿಗಳ ಜತೆ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿಯವರೂ ಉಪಸ್ಥಿತರಿರುವುದನ್ನು ಕಂಡು ಮತ್ತಷ್ಟು ಕೆರಳಿದ ಗ್ರಾಮಸ್ಥರು ದಿವಾಕರ ಶೆಟ್ಟಿಯವರಿಗೆ ಧಿಕ್ಕಾರ ಕೂಗಿದರು. ಅಲ್ಲದೆ ಸದಾ ಜನಸೇವೆಯ ಕಾರ್ಯಕ್ರಮ ಮಾಡುವ ಉದ್ದೇಶ ಇಟ್ಟುಕೊಂಡಿರುವ ಜಯಕರ್ನಾಟಕ ಸಂಘಟನೆ ಪಾದೂರಿನಲ್ಲಿ ಏಕೆ ಜನವಿರೋಧಿ ಕಾರ್ಯಕ್ಕೆ ಕೈ ಹಾಕಿದೆ ಎಂದು ಪ್ರಶ್ನಿಸಿದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಪೀಟರ್ ಡಿ’ಸೋಜಾ ಎಂಬವರು ಇಲ್ಲಿ ಜಮೀನು ಖರೀದಿಗೆ ಮುಂದಾಗಿದ್ದು, ಅವರ ಪರವಾಗಿ ಜಮೀನು ಪರಿಶೀಲಿಸಲು ಇಲ್ಲಿಗೆ ಆಗಮಿಸಿದ್ದೇನೆ. ನನಗೂ ಇಲ್ಲಿ ನಡೆಯುತ್ತಿರುವ ಸರ್ವೇಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

Share this article :

0 comments:

Speak up your mind

Tell us what you're thinking... !

 
Support : Creating Website | Johny Template | Mas Template
Copyright © 2011. Jayakirana Morning News - All Rights Reserved
Template Created by Creating Website Published by Mas Template
Proudly powered by Premium Blogger Template